ಬರ್ನಿಯರ್, ಫ್ರಾಂಕಾಯ್

	ಭಾರತಕ್ಕೆ ಬಂದಿದ್ದ (1656-1668) ಫ್ರೆಂಚ್ ಪ್ರವಾಸಿ, ಈತ ವೈದ್ಯನಾಗಿದ್ದ. ಇವನು ಭಾರತದಲ್ಲಿ ಕಂಡ ಮತ್ತು ಕೇಳಿದ ವಿಷಯಗಳನ್ನು ತನ್ನ ಪತ್ರಗಳಲ್ಲೂ ಗ್ರಂಥದಲ್ಲೂ ವಿವರಿಸಿದ್ದಾನೆ. ಶಾಹಜಹಾನನ ಅಳ್ವಿಕೆಯಲ್ಲಿ ಮತ್ತು ಔರಂಗ್‍ಜೇಬನ ರಾಜ್ಯಭಾರದ ಆರಂಭದ ಕಾಲದಲ್ಲಿ ತಾನು ಕಂಡದ್ದನ್ನು ಬರದಿದ್ದಾನೆ. ಇವನು ಮೊಗಲ್ ಆಸ್ಥಾನಿಕನೊಬ್ಬನ ಸೇವೆಯಲ್ಲಿದ್ದ. ಚಕ್ರವರ್ತಿ ಕುಮಾರನಾದ ದಾರಾವನ್ನು ಸೆರೆ ಹಿಡಿದು ತಂದು ದೆಹಲಿಯ ಬೀದಿಯಲ್ಲಿ ಮಾಡಿದ ಮೆರವಣಿಗೆಯನ್ನು ಇವನು ಕಣ್ಣಾರೆ ಕಂಡು ಬಣ್ಣಿಸಿದ್ದಾನೆ. ದಾರಾನನ್ನು ಕಂಡು ದೆಹಲಿಯ ಪುರಜನರು ಕಣ್ಣೀರುಗರೆದರಾದರೂ ಒಬ್ಬನಾದರೂ ಅವನಿಗಾಗಿ ಕತ್ತಿ ಹಿಡಿದು ಮುಂದೆ ಬಂದು ಅವನನ್ನು ಬಿಡಿಸಲು ಯತ್ನಿಸಲಿಲ್ಲ. ಯಾರೂ ಪ್ರತಿಭಟಿಸಲಿಲ್ಲ ಎಂದು ಬರೆದಿದ್ದಾನೆ. ಭಾರತೀಯ ಜನಸಮೂಹದ ಕ್ರಿಯಾಹೀನತೆಯನ್ನು ಎತ್ತಿತೋರಿಸಿದ್ದಾನೆ. ಶಾಹಜಹಾನ್ ಹಾಗೂ ಔರಂಗ್‍ಜೇಬರ ವ್ಯಕ್ತಿತ್ವವನ್ನು ಇವನು ಚೆನ್ನಾಗಿ ಚಿತ್ರಿಸಿದ್ದಾನೆ. ಅವನು ಕಂಡಂತೆ ಬಂಗಾಲ ಬಲು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಅದರೆ ಜನರು ಕಡುಬಡವರಾಗಿದ್ದರು. ಅಸ್ಥಾನದ ವೈಭವಕ್ಕಾಗಿ ಜನರ ಮೇಲೆ ಅತಿಯಾದ ತೆರಿಗೆಯನ್ನು ಹೇರಲಾಗಿತ್ತು ಎಂದು ಬರ್ನಿಯರ್ ಬರೆದಿದ್ದಾನೆ.
	(ಎಚ್.ಜಿ.ಅರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ